ಮುಂಬೈ: ಕರ್ನಾಟಕ ಮೂಲದ ಸುಂದರಿ ಸಿನಿ ಶೆಟ್ಟಿಗೆ ಮಿಸ್ ಇಂಡಿಯಾ ಕಿರೀಟ ಒಲಿದು ಬಂದಿದೆ.. ಭಾನುವಾರ ಮುಂಬೈನ ಜಿಯೋ ಕನ್ವೆನ್ಷನ್ ಸೆಂಟರ್ ನಲ್ಲಿ ಫೆಮಿನಾ ಮಿಸ್ ಇಂಡಿಯಾದ ಗ್ರ್ಯಾಂಡ್ ಫಿನಾಲೆ ನಡೆಯಿತು. ಈ ವೇಳೆ ಕರ್ನಾಟಕ ಮೂಲದ 21 ವರ್ಷದ ಸಿನಿ ಶೆಟ್ಟಿ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಇನ್ನೂ ರಾಜಸ್ಥಾನದ ರೂಬಲ್ ಶೆಖಾವತ್ ಮಿಸ್ ಇಂಡಿಯಾ 2022ರ ಮೊದಲ ರನ್ನರ್ ಅಪ್ ಆದರೆ, ಉತ್ತರ ಪ್ರದೇಶದ ಶಿನಾತಾ ಚೌಹಾನ್ ಅವರು ಮಿಸ್ ಇಂಡಿಯಾ 2022 ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.
ಫೆಮಿನಾ ಮಿಸ್ ಇಂಡಿಯಾ 2021ರ ವಿನ್ನರ್ ಮಾನಸ ವಾರಣಾಸಿ ಮಿಸ್ ಇಂಡಿಯಾ 2022 ಸಿನಿ ಶೆಟ್ಟಿಗೆ ಕಿರೀಟವನ್ನು ಧಾರಣೆ ಮಾಡಿದ್ದಾರೆ. ಸಿನಿ ಶೆಟ್ಟಿ, ರುಬಲ್ ಶೇಖಾವತ್, ಶಿನತಾ ಚೌಹಾಣ್, ಪ್ರಜ್ಞಾ ಅಯ್ಯಗಾರಿ ಮತ್ತು ಗಾರ್ಗೀ ನಂದಿ ಮೊದಲ ಐದು ಸ್ಥಾನದಲ್ಲಿದ್ದಾರೆ.
ಕರ್ನಾಟಕದ ಮೂಲದ ಸಿನಿ ಶೆಟ್ಟಿ ಮುಂಬೈನಲ್ಲಿ ಜನಿಸಿದ್ದು, ಅಕೌಂಟಿಂಗ್ ಮತ್ತು ಫೈನಾನ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ.
ಇನ್ನೂ ಫಿನಾಲೆ ಕಾರ್ಯಕ್ರಮದಲ್ಲಿ ಬಾಲಿವುಡ್ ನ ಸ್ಟಾರ್ ಗಳು ಸಹ ಭಾಗಿಯಾಗಿದ್ದರು. ನೇಹಾ ಧೂಪಿಯಾ, ಡಿನೋ ಮೋರಿಯಾ ಮತ್ತು ಮಲೈಕಾ ಅರೋರಾ , ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಅಲ್ಲದೇ ಕೃತಿ ಸನೋನ್, ಲಾರೆನ್ ಗಾಟ್ಲೀಬ್, ಮನೀಶ್ ಪಾಲ್, ರಾಜ್ ಕುಮಾರ್ ರಾವ್ ಸೇರಿದಂತೆ ಹಲವರು ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಿ ಕಾರ್ಯಕ್ರಮದ ಮೆರಗು ಹೆಚ್ಚಿಸಿದರು..