ಸಂಚಲನ ಸೃಷ್ಟಿಸಿದ್ದ ತಮಿಳಿನ ಸ್ಟಾರ್ ನಟ ಸೂರ್ಯ ಅಭಿನಯದ ‘ಸೂರರೈ ಪೊಟ್ರು’ ಚಿತ್ರ 68ನೇ ರಾಷ್ಟ್ರೀಯ ಪ್ರಶಸ್ತಿ ಪಟ್ಟಿಯಲ್ಲಿ 5 ಪ್ರಶಸ್ತಿಗಳನ್ನ ಗೆದ್ದು ದಾಖಲೆ ನಿರ್ಮಿಸಿದೆ.
ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಟ (ಸೂರ್ಯ), ಅತ್ಯುತ್ತಮ ನಟಿ (ಅಪರ್ಣಾ ಬಾಲ ಮುರಳಿ), ಅತ್ಯುತ್ತಮ ಚಿತ್ರಕಥೆ- (ಸುಧಾ ಕೊಂಗರ, ಶಾಲಿನಿ ಉಷಾ ನಯ್ಯರ್), ಅತ್ಯುತ್ತಮ ಹಿನ್ನೆಲೆ ಸಂಗೀತ- (ಜಿವಿ. ಪ್ರಕಾಶ್ ಕುಮಾರ್) ವಿಭಾಗಗಳಲ್ಲಿ ರಾಷ್ಟ್ರೀಯ ಪ್ರಶಸ್ತಿಗಳನ್ನ ಗೆದ್ದಿದೆ. ಈ ಹಿನ್ನಲೆಯಲ್ಲಿ ಚಿತ್ರ ನಿರ್ದೇಶನ ಮಾಡಿರುವ ಸುಧಾ ಕೊಂಗರ ಮಾಧ್ಯಮದವರೊಂದಿಗೆ ಮಾತನಾಡಿ ತಮ್ಮ ಖುಷಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
‘ಸುರರೈ ಪೊಟ್ರು’ ಸಿನಿಮಾದಲ್ಲಿ ಮೊದಲ ಸಲ ವಿಮಾನ ಹಾರಿದಾಗ ನಾಯಕ ಎಷ್ಟು ಖುಷಿಯಾಗಿದ್ದನೋ ಅದೇ ರೀತಿ ಭಾಸವಾಗುತ್ತಿದೆ ಎನ್ನುತ್ತಾರೆ ಸುಧಾ ಕೊಂಗರ. ಸಿನಿಮಾ ಕಮರ್ಷಿಯಲ್ ಆಗಿದ್ದರೂ ಪ್ರಶಸ್ತಿ ಬಂದಿರುವುದು ತುಂಬಾ ಖುಷಿ ತಂದಿದೆ ಎಂದಿದ್ದಾರೆ. ಈ ಕಥೆ ಎಲ್ಲರಿಗೂ ಸೇರಿದ್ದು ಎಂದು ನಾನು ನಂಬುತ್ತೇನೆ. ಗುರಿಗಾಗಿ ಹೋರಾಡುವಾಗ ಒಬ್ಬ ಸಾಮಾನ್ಯ ಪ್ರಜೆ ಎದುರಿಸುವ ಕಷ್ಟಗಳನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ಹಾಗಾಗಿ ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.
ಏರ್ ಡೆಕ್ಕನ್ ಅನ್ನು ಸ್ಥಾಪಿಸಿ ಎಲ್ಲರಿಗೂ ಕೈಗೆಟುಕುವ ದರದಲ್ಲಿ ವಿಮಾನ ಪ್ರಯಾಣ ಆರಂಭಿಸಿದ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನವನ್ನ ಆಧರಿಸಿದ ಚಿತ್ರ ‘ಸುರರೈ ಪೋಟ್ರು’. ಕೋವಿಡ್ನಿಂದಾಗಿ ಈ ಸಿನಿಮಾ ನೇರವಾಗಿ OTT ಪ್ಲಾಟ್ಫಾರ್ಮ್ ‘ಅಮೆಜಾನ್ ಪ್ರೈಮ್ ವಿಡಿಯೋ’ ನಲ್ಲಿ ಬಿಡುಗಡೆಯಾಯಿತು. ಸದ್ಯದಲ್ಲೇ ಈ ಚಿತ್ರ ಬಾಲಿವುಡ್ನಲ್ಲೂ ರಿಮೇಕ್ ಆಗಲಿದೆ. ಸುಧಾ ಕೊಂಗರನ್ ನಿರ್ದೇಶನದಲ್ಲಿ ಅಕ್ಷಯ್ ಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ.