Avatar 2: ಮತ್ತೊಮ್ಮೆ ಥಿಯೇಟರ್ ಗಳಲ್ಲಿ ಅಪ್ಪಳಿಸಲಿದೆ ಅವತಾರ್ 1
‘ಅವತಾರ್’ ಈ ಸಿನಮಾ ಬಗ್ಗೆ ಅರಿವಿಲ್ಲದ ಸಿನಿ ಪ್ರೇಮಿಗಳಿಲ್ಲ ಎಂದರೆ ಅತಿಶಯೋಕ್ತಿಯಲ್ಲ. 2009 ರಲ್ಲಿ ಜೇಮ್ಸ್ ಕ್ಯಾಮರೂನ್ ನಿರ್ದೇಶಿಸಿದ ಈ ಅದ್ಭುತ ದೃಶ್ಯ ಕಾವ್ಯ ವಿಶ್ವದ್ಯಂತ ದಾಖಲೆ ಸೃಷ್ಟಿಸಿತ್ತು. ಸಾವಿರಾರು ಕೋಟಿ ರುಪಾಯಿ ಹಣ ಗಳಸಿತ್ತು. ಇದಕ್ಕಾಗಿ ಜೇಮ್ಸ್ ಕ್ಯಾಮೆರಾನ್ ವಿಶೇಷ ಗ್ರಹವನ್ನೇ ಸೃಷ್ಟಿಸಿದ್ದರು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಈ ಸಿನಿಮಾದ ಅಭಿಮಾನಿಗಳಾಗಿದ್ದರು.
ಆ ಕಾಲಕ್ಕೆ ವಿವಿಧ ವಿಭಾಗಗಳಲ್ಲಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಅಲ್ಲದೆ.. ಈ ಸಿನಿಮಾ ಹಲವು ಸೀಕ್ವೆಲ್ ಗಳನ್ನು ಹೊಂದಿರುತ್ತದೆ ಎಂದು ಕ್ಯಾಮರೂನ್ ಅಂದು ಘೋಷಿಸಿದ್ದರು. ಅಂದಿನಿಂದ, ಪ್ರಪಂಚದಾದ್ಯಂತದ ಅನೇಕ ಅಭಿಮಾನಿಗಳು ಈ ಚಿತ್ರದ ಮುಂದುವರಿದ ಭಾಗಕ್ಕಾಗಿ ಕಾಯುತ್ತಿದ್ದಾರೆ.
ಚಿತ್ರತಂಡ ‘ಅವತಾರ್: ದಿ ವೇ ಆಫ್ ವಾಟರ್’ ಚಿತ್ರವನ್ನು ಡಿಸೆಂಬರ್ 16, 2022 ರಂದು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಈ ಚಿತ್ರದ ಟೀಸರ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ಭಾಗಕ್ಕಿಂತ ಈ ಸಿನಿಮಾ ಅದ್ಧೂರಿಯಾಗಿ ಮೂಡಿಬರಲಿದೆ ಎಂಬ ಭಾವನೆ ಪ್ರೇಕ್ಷಕರಲ್ಲಿ ಮೂಡಿದೆ. ಇದರೊಂದಿಗೆ ಅವತಾರ್ 2 ಚಿತ್ರದ ಮೇಲಿನ ನಿರೀಕ್ಷೆಗಳು ಭಾರೀ ಪ್ರಮಾಣದಲ್ಲಿ ಹೆಚ್ಚಿವೆ.
ಚಿತ್ರತಂಡ ಪಾರ್ಟ್ 2 ಬಿಡುಗಡೆಗೂ ಮುನ್ನ ಅವತಾರ್ 1 ಅನ್ನು ಮರು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಸುಮಾರು ಮೂರು ತಿಂಗಳ ಮೊದಲು ಅಂದರೆ ಸೆಪ್ಟೆಂಬರ್ 23 ರಂದು ಬಿಡುಗಡೆಯಾಗಲಿದೆ. ಅದೂ ಸಹ ಸೀಮಿತ ಚಿತ್ರಮಂದಿರಗಳಲ್ಲಿ ಮಾತ್ರ. ಸದ್ಯ ಹೊಸ ಟ್ರೇಲರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಕಾಯುತ್ತಿದ್ದಾರೆ ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ.