Vaishali : ಕಾಣೆಯಾಗಿದ್ದ ಗುಜರಾತ್ ಗಾಯಕಿ ಶವವಾಗಿ ಪತ್ತೆ…
ಗುಜರಾತ್ ನ ಖ್ಯಾತ ಗಾಯಕಿ ವೈಶಾಲಿ ಬುಲ್ಸಾರ ಕೆಲ ದಿನಗಳ ಹಿಂದೆ ಕಾಣೆಯಾಗಿದ್ದರು.. ಇದೀಗ ಅವರ ಮೃತದೇಹವು ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ..
ಆಗಸ್ಟ್ 28 ರಂದು ಸಂಜೆ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ. ವೈಶಾಲಿ ಕಾಣೆಯಾಗಿದ್ದರು ಎಂದು ಅವರ ಪತಿ ಅವರ ಮೃತದೇಹ ಸಿಗುವ ಎರಡು ದಿನಗಳ ಹಿಂದಷ್ಟೆ ದೂರು ನೀಡಿದ್ದರು. ಪರ್ಡಿ ತಾಲ್ಲೂಕಿನ ನಿರ್ಜನ ಪ್ರದೇಶವೊಂದರ ಬಳಿ ವೈಶಾಲಿಯ ಮೃತದೇಹ ಪತ್ತೆಯಾಗಿದೆ.. ಅವರದ್ದೇ ಕಾರಿನಲ್ಲಿ ಮೃತದೇಹ ಸಿಕ್ಕಿದ್ದು , ಈ ಸಾವಿನ ಸುತ್ತ ಹಲವು ಅನುಮಾನಗಳೇ ಹುಟ್ಟಿಕೊಂಡಿದೆ..
ವೈಶಾಲಿ ಮೃತದೇಹ ಅವರ ಕಾರಿನ ಹಿಂದಿನ ಸೀಟಿನಲ್ಲಿತ್ತು ಎಂದು ಪೊಲೀಸರು ಹೇಳಿದ್ದಾರೆ.. ವಲ್ಸಾಡ್ ಜಿಲ್ಲೆ, ಪರ್ಡಿ ತಾಲ್ಲೂಕಿನ ಪಾರ್ ನದಿ ತೀರದ ನಿರ್ಜನ ಪ್ರದೇಶದಲ್ಲಿ ವೈಶಾಲಿಯ ಕಾರು ಪತ್ತೆಯಾಗಿದೆ. ಸ್ಥಳೀರ್ಯಾರೊ ಕಾರನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಗಾಯಕಿಯ ಶವ ಪತ್ತೆಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸ್ಥಳೀಯ ಪೊಲೀಸ್ ಅಧಿಕಾರಿಗಳು, ಗಾಯಕಿಯನ್ನು ಉಸಿರುಗಟ್ಟಿಸಿ ಕೊಂದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ವೈಶಾಲಿಯ ಚಪ್ಪಲಿಗಳು ಡ್ರೈವರ್ ಸೀಟಿನ ಕೆಳಗೆ ಇವೆ. ವೈಶಾಲಿಯು ಪ್ರತಿರೋಧ ತೋರಿಸಿರುವುದಕ್ಕೆ ಯಾವುದೇ ಕುರುಹು ಸಿಕ್ಕಿಲ್ಲ. ಆಕೆಯ ಮೈಮೇಲೆ ಯಾವುದೇ ಗಾಯಗಳಿಲ್ಲ, ಆಕೆಯ ಬಟ್ಟೆಗಳು ಸಹ ಹರಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ..
ಆಗಸ್ಟ್ 27 ರಂದು ಸಂಜೆ 6:25 ಕ್ಕೆ ವಲ್ಸಾಡ್ ನ ತಮ್ಮ ನಿವಾಸದಿಂದ ವೈಶಾಲಿ ಹೊರಗೆ ಹೋಗಿದ್ದಾರೆ. ಹೋಗುವಾಗ, ತಾವು ನಗರದಾಚೆ ಇರುವ ಅಯ್ಯಪ್ಪ ದೇವಾಲಯದ ಬಳಿ ಗೆಳೆಯರನ್ನು ಕಾಣಲು ಹೋಗುತ್ತಿರುವುದಾಗಿ ಪತಿಗೆ ತಿಳಿಸಿದ್ದಾರೆ. ವೈಶಾಲಿ ಕಾಣೆಯಾದ ಪ್ರಕರಣ ಬೇಧಿಸಲು ಪೊಲೀಸರು ಐದು ತಂಡಗಳನ್ನು ಮಾಡಿಕೊಂಡು ಹುಡುಕಾಟ ನಡೆಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ..