ದೂರದರ್ಶನ ಸಿನಿಮಾ ಸದ್ಯ ಕುತೂಹಲದ ಕೇಂದ್ರಬಿಂದುವಾಗಿದೆ. ವಿಭಿನ್ನ ಪೋಸ್ಟರ್, ಟೀಸರ್ ಝಲಕ್ ಮತ್ತು ಇಲ್ಲಿವರೆಗೂ ಮನ ಮುಟ್ಟುವ ಪ್ರಚಾರ ದ ಮೂಲಕ ನಿರೀಕ್ಷೆಯನ್ನು ಇಮ್ಮಡಿಗೊಳಿಸಿರುವ ಈ ಚಿತ್ರದಲ್ಲಿ ಉಗ್ರಂ ಸಿನಿಮಾ ಖ್ಯಾತಿಯ ಮಂಜು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದುವರೆಗೂ
ಮಾಡಿರುವ ಸಿನಿಮಾಗಳಿಗಿಂತ ಈ ಚಿತ್ರದಲ್ಲಿ ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಕಿಟ್ಟಿ ಎಂಬ ಪಾತ್ರಕ್ಕೆ ಉಗ್ರಂ ಮಂಜು ಬಣ್ಣ ಹಚ್ಚಿದ್ದು, ಸಾಲು ಸಾಲು ಒದ್ದಾಟ ಅನುಭವಿಸುವ, ವೈಫಲ್ಯಗಳನ್ನು ಎದುರಿಸಿಕೊಂಡು ಗುರಿ ಬೆನ್ನುಟ್ಟುವ ಗಟ್ಟಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಾಯಕ ಮನು ಮತ್ತು ಕಿಟ್ಟಿ ಹೈವೋಲ್ಟೇಜ್ ಸೀಕ್ವೆನ್ಸ್ ಸಿನಿಮಾದಲ್ಲಿದೆ. ಮಂಜು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ
ಕಾರ್ಯಕಾರಿ ನಿರ್ಮಾಪಕನಾಗಿ, ಕಲಾ ವಿನ್ಯಾಸಕನಾಗಿಯೂ ತಂಡದ ಜೊತೆ ಜವಾಬ್ದಾರಿಯನ್ನ ಹಂಚಿಕೊಂಡಿದ್ದಾರೆ…
ನೈಜ ಘಟನೆ ಹಾಗೂ ಕಾಲ್ಪನಿಕತೆ ಕಥಾಹಂದರ ಸುತ್ತ ಸಾಗುವ ದೂರದರ್ಶನ ಸಿನಿಮಾದಲ್ಲಿ ಪೃಥ್ವಿ ಅಂಬರ್ ನಾಯಕನಾಗಿ ನಟಿಸಿದ್ದು, ಅಯಾನಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಸೇರಿದಂತೆ ಮತ್ತಿತರ ತಾರಾಗಣ ಸಿನಿಮಾದಲ್ಲಿದೆ.
ಸುಕೇಶ್ ಶೆಟ್ಟಿ ನಿರ್ದೇಶನದಲ್ಲಿ ತಯಾರಾಗುತ್ತಿರುವ “ದೂರದರ್ಶನ” ಚಿತ್ರ ಈಗಷ್ಟೇ ಡಬ್ಬಿಂಗ್ ಮುಗಿಸಿ ಶೀಘ್ರದಲ್ಲಿ ತೆರೆಗೆ ತರಲು ಚಿತ್ರ ತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸ ಗಳಲ್ಲಿ ಬ್ಯುಸಿಯಾಗಿದೆ .
ಸಿನಿಮಾವನ್ನು ವಿಎಸ್ ಮೀಡಿಯಾ ಎಂಟರ್ ಪ್ರೈಸಸ್ ಬ್ಯಾನರ್ ನಡಿ ರಾಜೇಶ್ ಭಟ್ ನಿರ್ಮಾಣ ಮಾಡಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜನೆ, ಅರುಣ್ ಸುರೇಶ್ ಕ್ಯಾಮೆರಾ ವರ್ಕ್, ನಂದೀಶ್ ಟಿಜಿ ಸಂಭಾಷಣೆ, ಪ್ರದೀಪ್ ಆರ್ ರಾವ್ ಸಂಕಲನ ಸಿನಿಮಾಕ್ಕಿದೆ. ದೂರದರ್ಶನ ಸಿನಿಮಾದಲ್ಲಿ ನಾಲ್ಕು ಹಾಡುಗಳು, ಎರಡು ಫೈಟ್ ಸೀನ್ಸ್ ಗಳಿದ್ದು, ಹೊಡೆದಾಟದ ದೃಶ್ಯಗಳನ್ನು ನೈಜ ರೀತಿಯಲ್ಲಿ ಚಿತ್ರೀಕರಿಸಲಾಗಿದೆ. ಶೀರ್ಘದಲ್ಲಿಯೇ ಚಿತ್ರತಂಡ ತೆರೆಗೆ ಬರಲು ಸಜ್ಜಾಗುತ್ತಿದೆ.