Kantara : ತುಳುನಾಡಿನ ಸಂಸ್ಕೃತಿಯ ಪ್ರತಿಬಿಂಬ ರಿಷಬ್ ಶೆಟ್ಟಿ..!!!
ಇವ್ರು ದುಡ್ಡು ಮಾಡುವುದಕ್ಕೆ ಸಿನಿಮಾ ಮಾಡುತ್ತಿಲ್ಲ.. ಆದ್ರೆ ಇವ್ರು ಸಿನಿಮಾದಿಂದಲೇ ದುಡ್ಡು ಮಾಡುತ್ತಾರೆ. ಜನರ ಪ್ರೀತಿಯನ್ನೂ ಗಳಿಸುತ್ತಾರೆ. ಎರಡುವರೆ, ಎರಡು ಮುಕ್ಕಾಲು ಗಂಟೆ ಮನಸ್ಸಿಗೆ ಮುದವನ್ನು ನೀಡ್ತಾರೆ. ಒಂದು ದಿನ ಪೂರ್ತಿ ಅವರ ಸಿನಿಮಾದ ಹ್ಯಾಂಗ್ ಓವರ್ ನಲ್ಲಿರುವಂತೆಯೂ ಮಾಡ್ತಾರೆ. ಸಿನಿಮಾ ಮತ್ತು ಸಿನಿಮಾದ ಕಥೆಯೊಳಗೆ ಇವ್ರಿದ್ರೂ ಅವರೊಂದಿಗೆ ನಮ್ಮನ್ನು ಪರವಶಮಾಡಿಕೊಳ್ಳುವಂತೆಯೂ ಮಾಡ್ತಾರೆ.
ಇವ್ರು ಸ್ಯಾಂಡಲ್ ವುಡ್ ನ ತ್ರಿಬಲ್ ಆರ್ ಸ್ಟಾರ್ ಗಳು…. ಸುಮಾರು ಎರಡು ದಶಕಗಳ ಹಿಂದೆ ಸ್ಯಾಂಡಲ್ ವುಡ್ ನಲ್ಲಿ ತ್ರಿಬಲ್ ಆರ್ ಖ್ಯಾತಿಯ ಹೀರೋಯಿನ್ ಗಳಿದ್ದರು. ನೆನಪಿದೆಯಾ, ರಕ್ಷಿತಾ, ರಾಧಿಕಾ ಮತ್ತು ರಮ್ಯಾ. ಇದೀಗ ತ್ರಿ ಬಲ್ ಆರ್ ಖ್ಯಾತಿಯ ನಿರ್ದೇಶಕರು ಇದ್ದಾರೆ. ಹೀರೋಗಳು ಇದ್ದಾರೆ. ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಮತ್ತು ರಾಜ್ ಬಿ. ಶೆಟ್ಟಿ. ಇವ್ರು ಸ್ಯಾಂಡಲ್ ವುಡ್ ನ ಶೆಟ್ಟಿ ಗ್ಯಾಂಗ್ ಕೂಡ
ಹೌದು…!
ನೈಜತೆ, ಸೃಜನಶೀಲತೆಯೊಂದಿಗೆ ನಮ್ಮ ಕಣ್ಣ ಮುಂದೆ ನಡೆಯುವ ದಿನ ನಿತ್ಯದ ಘಟನೆಗಳೇ ಇವ್ರ ಸಿನಿಮಾ ಕಥೆಯ ಜೀವಾಳ. ನಮ್ಮ ನೆಲದ ಸಂಸ್ಕತಿ, ಆಚಾರ ವಿಚಾರಗಳೇ ಇವ್ರ ಸಿನಿಮಾದ ಬಂಡವಾಳ.. ಸ್ನೇಹ, ನಂಬಿಕೆ, ವಿಶ್ವಾಸ, ಬದ್ಧತೆ ಮತ್ತು ತನ್ನತನವೇ ಇವ್ರ ಯಶಸ್ಸಿನ ಸಿಕ್ರೇಟ್. ಪ್ರೇಕ್ಷಕನ ಅಂತರಂಗವನ್ನು ಅರಿತುಕೊಂಡು ಸಿನಿಮಾ ಮಾಡುವುದು ಅಷ್ಟೊಂದು ಸುಲಭವಿಲ್ಲ. ಪ್ರತಿ ಸಿನಿಮಾದ ಪ್ರತಿಯೊಂದು ಫ್ರೇಮ್ ಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರೀಕರಿಸುವುದರ ಹಿಂದೆ ಇವರ ಶ್ರಮ ಸಾಕಷ್ಟಿದೆ.
ಅಷ್ಟೇ ಅಲ್ಲ ತಾವು ಮಾಡಿರುವ ಪ್ರೀತಿಯ ಸಿನಿಮಾವನ್ನು ಯಾವ ರೀತಿ ಪ್ರಚಾರ ಮಾಡಬೇಕು.. ಪ್ರೇಕ್ಷಕರಿಗೆ ಯಾವ ರೀತಿ ತಲುಪಿಸಬೇಕು ಎಂಬುದು ಕೂಡ ಇವ್ರಿಗೆ ಚೆನ್ನಾಗಿ ಗೊತ್ತು. ಹೀಗಾಗಿಯೇ ಹೇಳಿದ್ದು, ಇವ್ರು ದುಡ್ಡಿಗಾಗಿ ಸಿನಿಮಾ ಮಾಡಲ್ಲ.. ಸಿನಿಮಾದಿಂದ ಇವ್ರು ದುಡ್ಡು ಮಾಡುತ್ತಾರೆ. ಯಾಕಂದ್ರೆ ಇವ್ರು ಸಿನಿಮಾವನ್ನು ಅಷ್ಟೊಂದು ಪ್ರೀತಿಸ್ತಾರೆ. ಹಾಗಂತ ಇವ್ರು ಸಿನಿಮಾ ಕುಟುಂಬದಿಂದ ಬಂದವರಲ್ಲ. ಆದ್ರೆ ಈಗ ಇವ್ರಿಗೆ ಸಿನಿಮಾ ರಂಗವೇ ಕುಟುಂಬವಾಗಿದೆ.
ಅಂದ ಹಾಗೇ, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ ಅವರು ಈ ವರ್ಷದ ಮೂರು ಚಿತ್ರಗಳನ್ನು ನೋಡಿದಾಗ ಅಚ್ಚರಿಯೂ ಆಗುತ್ತೆ. ಯಾವುದೇ ಸ್ಟಾರ್ ಗಳು ಇಲ್ಲದ ಸಿನಿಮಾ ಪ್ರೇಕ್ಷಕರನ್ನು ಮನಸ್ಸನ್ನು ಗೆಲ್ಲುತ್ತದೆ ಅಂದ್ರೆ ಅವರ ಅಭಿನಯ ಮತ್ತು ಚಿತ್ರದ ಮೇಕಿಂಗ್, ಚಿತ್ರಕಥೆಯೇ ಪ್ರಮುಖ ಕಾರಣ.
ಇದೀಗ ಕಾಂತಾರ ಚಿತ್ರವೂ ಅಷ್ಟೇ..! ಇದು ಒಂದು ದಂತ ಕಥೆ ಎಂಬ ಟ್ಯಾಗ್ ಲೈನ್ ಹಾಕೊಂಡಿದೆ ಚಿತ್ರ ತಂಡ. ಆದ್ರೆ ಕಾಂತಾರ ಚಿತ್ರದ ಕಥೆ ಅಥವಾ ಚಿತ್ರಕಥೆ ದಂತ ಕಥೆಯಲ್ಲ.. ಅದು ಕರಾವಳಿಯಲ್ಲಿ ಈ ಹಿಂದೆ ನಡೆದಿದ್ದ ಮತ್ತು ಈಗಲೂ ನಡೆಯುತ್ತಿರುವ ಪ್ರತಿನಿತ್ಯದ ಘಟನೆಗಳು. ಅಷ್ಟರ ಮಟ್ಟಿಗೆ ಕಾಂತಾರ ಚಿತ್ರದ ಕಥೆ ಗಟ್ಟಿತನದಿಂದ ಕೂಡಿದೆ.
ಮೇಲ್ನೋಟಕ್ಕೆ ಇದು ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಘರ್ಷವಾಗಿದ್ರೂ ನಮ್ಮ ನೆಲದ ಸಂಸ್ಕøತಿ ಮತ್ತು ಆಚಾರ ವಿಚಾರಗಳು ನಂಬಿಕೆಯಿಂದ ಇರುತ್ತವೆ ಎಂಬುದು ಕೂಡ ಅಷ್ಟೇ ಸತ್ಯ. ಕರಾವಳಿಯಲ್ಲಿ ದೈವರಾಧನೆಯನ್ನು ಪ್ರತಿ ಮನೆಯಲ್ಲೂ ಭಕ್ತಿಯಿಂದ ಮತ್ತು ನಂಬಿಕೆಯಿಂದ ಆರಾಧನೆ ಮಾಡುತ್ತಾರೆ. ದೈವದ ನುಡಿ ಮತ್ತು ದೈವದ ಅಭಯವೇ ಕರಾವಳಿಯ ಪ್ರತಿ ಮನೆ, ಪ್ರತಿ ಕುಟುಂಬ ಮತ್ತು ಇಡೀ ಹಳ್ಳಿಗೆ ಶ್ರೀ ರಕ್ಷೆಯಾಗಿರುತ್ತದೆ. ಅಷ್ಟರ ಮಟ್ಟಿಗೆ ಕರಾವಳಿಯಲ್ಲಿ ದೈವರಾಧನೆಯನ್ನು ನಂಬುತ್ತಾರೆ. ಕಾಂತಾರ ಚಿತ್ರದಲ್ಲೂ ಅಷ್ಟೇ.
ಪಂಜುರ್ಲಿ ದೈವದ ಅಟ್ಟಹಾಸ.. ನುಡಿ ಮತ್ತು ಅಭಯವೇ ಕಾಂತಾರ ಚಿತ್ರದ ಹೈಲೈಟ್ಸ್.
ಕಾಡಂಚಿನಲ್ಲಿ ಬದುಕುವ ಜನರು, ಕೋಳಿ ಅಂಕ, ಕಂಬಳ, ಧೈವರಾಧನೆ, ಹೀಗೆ ತಮ್ಮ ನೆಲದ ಆಚಾರ – ವಿಚಾರಗಳನ್ನು ಆಚರಣೆ ಮಾಡಿಕೊಂಡು ಅದರಲ್ಲೇ ಸಂಭ್ರಮಿಸುವ ಜನರ ಚಿತ್ರಣ ಒಂದು ಕಡೆಯಾದ್ರೆ, ಸಭ್ಯನಂತೆ ನಟಿಸುವ ಕುತಂತ್ರಿ ಜಮಿನ್ದಾರನÀ ದಬ್ಬಾಳಿಕೆÉ, ಅರಣ್ಯ ಭೂಮಿಯನ್ನು ಒತ್ತುವರಿ ಮಾಡದಂತೆ ಅರಣ್ಯವನ್ನು ಸಂರಕ್ಷಣೆ ಮಾಡುವ ಅರಣ್ಯಾಧಿಕಾರಿಯ ದರ್ಪತನ, ತಮ್ಮ ನಂಬಿಕೆಯ ಪಂಜುರ್ಲಿ ದೈವದ ಅಭಯ ಮತ್ತು ಶಕ್ತಿಯಿಂದ ಧರ್ಮ ಸ್ಥಾಪನೆಯ ಸಂದೇಶದ ಜೊತೆಗೆ ಸಾಮಾಜಿಕ ಕಳಕಳಿಯನ್ನು ಸೂಚಿಸುವ ಚಿತ್ರ ಕಾಂತಾರ.
ರಿಷಬ್ ಶೆಟ್ಟಿಯವರ ಅಭಿನಯಕ್ಕೊಂದು ಸೆಲ್ಯೂಟ್ ಕೊಡಲೇಬೇಕು. ಅದರಲ್ಲೂ ಕೊನೆಯ ಸುಮಾರು 20 ನಿಮಿಷ ರಿಷಬ್ ಶೆಟ್ಟಿ ಮಂತ್ರ ಮುಗ್ದರನ್ನಾಗಿಸಿದ್ದಾರೆ. ದೈವರಾಧನೆಯ ಕುಣಿತವಾಗಿರಬಹುದು.. ನೃತ್ಯವಾಗಿರಬಹುದು., ಅಥವಾ ಆವೇಶವಾಗಿರಬಹುದು.. ರಿಷಬ್ ಶೆಟ್ಟಿ ಸೈ ಎನಿಸಿಕೊಂಡಿದ್ದಾರೆ. ಯಾರ ಮನೆಯಲ್ಲಿ ದೈವರಾಧನೆ ಮಾಡುತ್ತಾರೋ ಅಂಥವರು ಥಿಯೇಟರ್ ನಲ್ಲಿ ಸಿನಿಮಾ ನೋಡ್ತಾ ಇದ್ರೆ ತಮಗೆ ಗೊತ್ತಿಲ್ಲದ ಹಾಗೇ ಕೈಮುಗಿಯುವಂತೆ ಮಾಡಿದ್ದಾರೆ ರಿಷಬ್ ಶೆಟ್ಟಿ.
ಒಂದಂತೂ ಸತ್ಯ.. ದೈವದ ನುಡಿ ಮತ್ತು ಅಭಿಯ ಯಾವತ್ತೂ ಸುಳ್ಳು ಆಗುವುದಿಲ್ಲ ಎಂಬ ನಂಬಿಕೆ ಇದೆ. ಹಾಗೇ ದೈವದ ಪಾತ್ರಧಾರಿ ಹೇಳುವ ನುಡಿಗೆ ಎಷ್ಟು ಮಹತ್ವ ಕೊಡಬೇಕೋ ಎಂಬುದು ಅವರವರಿಗೆ ಬಿಟ್ಟ ವಿಚಾರ. ಆದ್ರೆ ದೈವದ ಪಾತ್ರಧಾರಿಯಲ್ಲಿ ದೈವಾಂಶವನ್ನು ಕಾಣುವ ನಂಬಿಕೆ ನಮ್ಮ ತುಳುನಾಡಿನಲ್ಲಿದೆ. ದೈವರಾಧನೆಯಿಂದ ಒಡೆದು ಹೋಗಿದ್ದ ಕುಟುಂಬಗಳು ಒಂದಾಗುತ್ತವೆ..
ಬಿರುಕು ಬಿಟ್ಟಿರುವ ಹಳ್ಳಿಯ ಜನರನ್ನು ಒಗ್ಗಟ್ಟಿನಿಂದ ಇರುವಂತೆ ಮಾಡುತ್ತದೆ ಎಂಬುದಕ್ಕೆ ಹಲವು ನಿದರ್ಶನಗಳಿವೆ. ತುಳುನಾಡಿನಲ್ಲಿ ದೇವರ ಪೂಜೆಗಿಂತಲೂ ದೈವರಾಧನೆಗೆ ಹೆಚ್ಚಿನ ಮಹತ್ವ ಕೊಡ್ತಾರೆ. ಈ ಎಲ್ಲಾ ಅಂಶಗಳನ್ನು ಕಾಂತಾರ ಚಿತ್ರದಲ್ಲೂ ನೋಡಬಹುದಾಗಿದೆ.
ಒಟ್ಟಿನಲ್ಲಿ ರಿಷಬ್ ಶೆಟ್ಟಿ ಅವರು ಕಾಂತಾರ ಚಿತ್ರದ ಮೂಲಕ ತುಳನಾಡಿನ ಸಂಸ್ಕøತಿಯ ರಾಯಭಾರಿಯಾಗಿ ಕಂಗೊಳಿಸಿದ್ದಾರೆ.
– ಸನತ್ ರೈ –
Kantara Review