Kantara : ಕರಾವಳಿಯ ಪ್ರತಿ ಮನೆ – ಮನದ ಕಥೆಯೇ ಕಾಂತಾರದ ದೈವರಾಧನೆ….!
ಭೂತಾರಾಧನೆ.. ದೈವಾರಾಧನೆ.. ನೇಮ, ಕೋಲ.. ಇದು ಕರಾವಳಿ ಜನರ ಬದುಕಿನ ಭಾಗ. ಪ್ರತಿ ದಿನ ಪ್ರತಿ ಮನೆಯಲ್ಲೂ ತನ್ನ ಕುಟುಂಬದ ದೈವದ ಹೆಸರನ್ನು ಒಂದು ಬಾರಿಯಾದ್ರೂ ನೆನಪಿಸಿಕೊಳ್ಳದವರು ತೀರಾ ವಿರಳ.
ತವರಿನಿಂದ ಎಷ್ಟೇ ದೂರದಲ್ಲೇ ಇರಲಿ, ಆದ್ರೆ ವರ್ಷಕ್ಕೊಮ್ಮೆ ನಡೆಯುವ ದೈವರಾಧನೆಯನ್ನು ಕಣ್ತುಂಬಿಕೊಳ್ಳದೇ ಇದ್ರೆ ಮನಸ್ಸಿಗೆ ಸಮಧಾನವಿರಲ್ಲ. ಅಷ್ಟರ ಮಟ್ಟಿಗೆ ಕರಾವಳಿ ಜನರ ಬದುಕಿನಲ್ಲಿ ದೈವರಾಧನೆ ಅನ್ನೋದು ಅವರಿಸಿಕೊಂಡು ಬಿಟ್ಟಿದೆ.
ಹಾಗಂತ ಕಾಂತಾರ ಚಿತ್ರ ನೋಡಿದ ಮೇಲೆ ದೈವರಾಧನೆಯ ಮೇಲೆ ಜಾಸ್ತಿ ನಂಬಿಕೆ ಅಥವಾ ಪ್ರಚಾರ ಬರುತ್ತಿದೆ ಎಂದು ಹೇಳುವುದು ತಪ್ಪಾಗುತ್ತದೆ. ಇಷ್ಟು ದಿನ ಅವರ ಮನಸ್ಸಿನಲ್ಲಿ ತಾನು ನಂಬಿದ ದೈವವನ್ನು ನೆನಪಿಸಿಕೊಳ್ಳುತ್ತಿದ್ದರು. ಭಯ, ಭಕ್ತಿಯಿಂದ ಪ್ರಾರ್ಥನೆ ಮಾಡಿಕೊಂಡು ಆರಾಧಿಸುತ್ತಿದ್ದರು.
ಆದ್ರೆ , ಇದೀಗ ಕಾಂತಾರ ಸಿನಿಮಾ ಮಾಡಿರುವ ಪವಾಡದಿಂದ ಕರಾವಳಿಯ ಭೂತರಾಧನೆಯ ಜೊತೆಗೆ ವಿಶ್ಲೇಷಣೆ ಹಾಗೂ ಭೂತರಾಧನೆಯ ವಿವಿಧ ಕಥೆಗಳು ಚಾಲ್ತಿಗೆ ಬರುತ್ತಿವೆ. ಸಾಮಾಜಿಕ ಜಾಲ ತಾಣದಲ್ಲಂತೂ ಸದ್ಯಕ್ಕೆ ಭೂತರಾಧನೆಯೇ ಟ್ರೆಂಡಿಂಗ್ ಆಗಿಬಿಟ್ಟಿದೆ.
ಆದ್ರೆ ನೆನಪಿಡಿ, ಕಾಂತಾರ ಅನ್ನೋದು ಕನ್ನಡದ ಒಂದು ಸಿನಿಮಾ.. ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಘರ್ಷದ ಚಿತ್ರ. ಇಲ್ಲಿ ಚಿತ್ರದ ಯಶಸ್ಸು ಮತ್ತು ಗೆಲುವಿನ ಹಿಂದೆ ಇರುವುದು ಕ್ಷೇತ್ರಪಾಲ ಗುಳಿಗ ಮತ್ತು ಧರ್ಮ ರಕ್ಷಕ ಪಂಜುರ್ಲಿ. ಈ ಎರಡು ವಿಚಾರಗಳು ಕಾಂತಾರ ಚಿತ್ರದಲ್ಲಿ ಇಲ್ಲದೆ ಇರುತ್ತಿದ್ರೆ ಒಂದು ಮಾಮೂಲಿ ಚಿತ್ರವಾಗಿರುತ್ತಿತ್ತು. ಇಷ್ಟೊಂದು ಹೈಪ್ ಸಿಗುತ್ತಿರಲಿಲ್ಲ. ಇಷ್ಟೊಂದು ಹೆಸರು ಕೂಡ ಮಾಡುತ್ತಿರಲಿಲ್ಲ.
ಆದ್ರೆ ರಿಷಬ್ ಶೆಟ್ಟಿಯವರಿಗೆ ಪಂಜುರ್ಲಿಯ ಅಭಯವಿತ್ತು. ದೈವದ ಮಾತಿನಂತೆ ಕಾಂತಾರ ಚಿತ್ರ ಗೆದ್ದಿದೆ. ಅದರಲ್ಲೂ ಪಂಜುರ್ಲಿ ದೈವದ ಮೂಲ ಧÀರ್ಮಸ್ಥಳದ ಅಣ್ಣಪ್ಪ ಸ್ವಾಮಿ.
ಹೀಗಾಗಿ ರಿಷಬ್ ಶೆಟ್ಟಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು, ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿಯವರ ಆಶೀರ್ವಾದ ಪಡೆದುಕೊಂಡೇ ಈ ಚಿತ್ರವನ್ನು ಶುರುಮಾಡಿದ್ದು ಅಂತ ರಿಷಬ್ ಶೆಟ್ಟಿಯವರು ಪ್ರತಿ ಸಂದರ್ಶನದಲ್ಲೂ ಹೇಳುತ್ತಿದ್ದಾರೆ.
ಹಾಗೇ ಚಿತ್ರದ ಪೂರ್ವ ತಯಾರಿಗೆ ರಿಷಬ್ ಶೆಟ್ಟಿಯವರು ಪಂಜುರ್ಲಿ ದೈವದ ಕೋಲವನ್ನು ನೋಡಿದ್ದಾರೆ. ಅಲ್ಲಿ ಪಂಜುರ್ಲಿ ದೈವದಲ್ಲಿ ತಾನು ಮಾಡುತ್ತಿರುವ ಚಿತ್ರದಲ್ಲಿ ನಟನೆ ಮಾಡುತ್ತೇನೆ. ಅನುಗ್ರಹ ನೀಡು ಎಂದು ಕೋರಿಕೊಂಡಿದ್ದಾರೆ.
ಅದಕ್ಕೆ ಪಂಜುರ್ಲಿಯ ದೈವ ನರ್ತಕ ತನ್ನ ಮುಖದ ಬಣ್ಣವನ್ನು ರಿಷಬ್ ಶೆಟ್ಟಿಯವರ ಮುಖಕ್ಕೆ ಹೆಚ್ಚುವ ಮೂಲಕ ಅಭಯ ನೀಡಿದ್ದರು. ಇದನ್ನು ಕೂಡ ರಿಷಬ್ ಶೆಟ್ಟಿ ಹೇಳಿಕೊಂಡಿದ್ದಾರೆ.
ಆದ್ರೆ ಇದು ಸಂಪ್ರದಾಯ. ಅಲ್ಲಿನ ಪದ್ಧತಿ. ದೈವ ನರ್ತಕರ ಸಮುದಾಯದಲ್ಲೂ ಇದೇ ರೀತಿಯ ಆಚರಣೆಗಳಿವೆ. ತಮ್ಮ ಸಮುದಾಯದ ವ್ಯಕ್ತಿ ಮೊದಲ ಬಾರಿ ದೈವ ನರ್ತಕನಾಗುವ ವೇಳೆ ಅವರಿಗೆ ಆಶೀರ್ವಾದ ಮಾಡುವ ಸಾಂಪ್ರದಾಯವಿದೆ.
ಇಲ್ಲಿ ರಿಷಬ್ ಶೆಟ್ಟಿ ದೈವ ನರ್ತಕರ ಸಮುದಾಯವನ್ನು ಪ್ರತಿನಿಧಿಸುವ ಪಾತ್ರವನ್ನು ಮಾಡಿದ್ದಾರೆ. ಹೀಗಾಗಿ ಆ ಸಮುದಾಯಕ್ಕೆ ದಕ್ಕೆಯಾಗಬಾರದು ಎಂಬ ಎಚ್ಚರಿಕೆ ಮತ್ತು ಜವಾಬ್ದಾರಿ ಅವರ ಮೇಲಿತ್ತು. ಅದನ್ನು ಅವರು ಪಾಲಿಸಿಕೊಂಡು ಬಂದಿದ್ದಾರೆ.
ಇನ್ನು ಟೀಕೆ ಮಾಡುವವರಿಗೆ ಏನು ಬೇಕಾದ್ರೂ ಹೇಳಬಹುದು, ಅದು ಅವರ ವೈಯಕ್ತಿಕ ವಿಚಾರ. ಕೇಳವರು ಹೇಳುತ್ತಿದ್ದಾರೆ. ಭೂತರಾಧನೆಯಲ್ಲಿ ಮಾಂಸಹಾರವಿದೆ ಎಂಬುದು.
ಹೌದು, ದೈವರಾಧನೆಯಲ್ಲಿ ಕೋಳಿ ಮತ್ತು ಹಂದಿಯನ್ನು ಬಲಿಕೊಡುವ ಪದ್ಧತಿಯೂ ಇದೆ. ದೈವರಾಧನೆ ನಡೆಯುವ ಸ್ಥಳದಲ್ಲಿ ರಕ್ತದ ಹನಿ ಬೀಳಬೇಕು ಎಂಬ ಕಾರಣಕ್ಕಾಗಿಯೇ ಕೆಲವೊಂದು ಕಡೆ ಕೋಳಿ ಅಂಕ (ಕೋಳಿ ಫೈಟ್) ಅನ್ನು ಕೂಡ ಆಯೋಜನೆ ಮಾಡಲಾಗುತ್ತಿದೆ.
ಇನ್ನು ಕೆಲವರು ರಿಷಬ್ ಶೆಟ್ಟಿ ಕಾಂತಾರ ಚಿತ್ರದ ಶೂಟಿಂಗ್ ನಲ್ಲಿ ಮಾಂಸಹಾರವನ್ನು ನಿಷೇಧ ಮಾಡಿದ್ದೇವು. ನಾನು ಮಾಂಸಹಾರ ತ್ಯಜಿಸಿದ್ದೆ ಎಂದು ಹೇಳಿದ್ದರು. ಇದಕ್ಕೂ ಕೂಡ ಕಮೆಂಟ್ ಗಳು ಬಂದಿದ್ದವು.
ಆದ್ರೆ ರಿಷಬ್ ಶೆಟ್ಟಿ ಅವರ ಮಾಂಸಹಾರ ಬಿಟ್ಟಿರುವುದು ಅವರ ವೈಯಕ್ತಿಕ ವಿಚಾರ. ಅವರಿಗೆ ದೈವದ ಮೇಲಿನ ನಂಬಿಕೆ ಒಂದು ಕಡೆಯಾದ್ರೆ, ಮತ್ತೊಂದು ಭಯವೂ ಇದ್ದೇ ಇದೆ. ಹೀಗಾಗಿ ಅವರು ಮಾಂಸಹಾರ ಬಿಟ್ಟಿರಬಹುದು. ಅದೂ ಅಲ್ಲದೆ, 8ದೈವರಾಧನೆಯ ದಿನ ದೈವ ನರ್ತಕರು ಬರೀ ಫಲಹಾರದಲ್ಲಿ ಇರುತ್ತಾರೆ. ಹೀಗಾಗಿ ಇದನ್ನು ಕೂಡ ಟೀಕೆ ಮಾಡೋದು ಕೂಡ ಸರಿಯಲ್ಲ.
ಇನ್ನು ಕಾಂತಾರ ಸಿನಿಮಾವನ್ನು ಒಂದು ಸಿನಿಮಾವಾಗಿ ನೋಡಿ ಅಷ್ಟೇ. ಅದನ್ನು ಟೀಕೆ ಮಾಡಬೇಕು. ಅದಕ್ಕೆ ಜಾತಿಯ ಲೇಪನ ಹಾಕಬೇಕು. ರಾಜಕೀಯ ನಡೆಸಬೇಕು ಅನ್ನೋ ಲೆಕ್ಕಚಾರವನ್ನು ಬಿಟ್ಟು ಬಿಡಿ.
ಯಾಕಂದ್ರೆ ಕರಾವಳಿಯ ಪ್ರತಿ ಮನೆ – ಮನೆದಲ್ಲೂ ಒಂದೊಂದು ಕಾಂತಾರದ ಕಥೆಗಳಿವೆ. ಪ್ರತಿ ಮನೆತನ, ಕುಟುಂಬ ಅಥವಾ ಊರಿನ ದೈವಗಳಿಗೆ ಒಂದೊಂದು ರೀತಿಯ ಹಿನ್ನಲೆಗಳಿವೆ.
ಒಂದೊಂದು ರೀತಿಯ ಪಾಡ್ದಾನಗಳಿವೆ. ಭಿನ್ನ ವಿಭಿನ್ನ ಮಾದರಿಯ ಆಚಾರ, ವಿಚಾರಗಳೂ ಇವೆ. ಆದ್ರೆ ನೆನಪಿಡಿ, ದೈವರಾಧನೆಯಲ್ಲಿ ಯಾವುದೇ ಜಾತಿ -ಧರ್ಮದ ಹಂಗಿಲ್ಲ. ಸಮಾಜದ ಎಲ್ಲಾ ಜಾತಿ – ಧರ್ಮದವರು ಭಾಗಿಯಾಗಿ ನಡೆಯುವ ಧಾರ್ಮಿಕ ಆಚರಣೆ ದೈವರಾಧನೆ. ಹಾಗೇ ನೋಡಿದ್ರೆ, ದೈವರಾಧನೆಯ ಮೂಲ ಮನೆಗಳಿರುವುದೇ ಜೈನರ ಹೆಸರಿನಲ್ಲಿ ಅನ್ನೋದೇ ವಿಶೇಷ.
ಹಾಗೇ ದೈವ ನರ್ತಕರು ತಳ ಸಮುದಾಯವರು. ಆದ್ರೆ ದೈವ ನರ್ತನದ ವೇಳೆ ಆ ಅವರನ್ನು ದೈವವಾಗಿ ನೋಡುತ್ತಾರೆ. ದೈವ ನರ್ತಕ ಹೇಳುವ ನುಡಿ, ಅಭಯವನ್ನು ಭಯ ಮತ್ತು ಭಕ್ತಿಯಿಂದ ಆಲಿಸುತ್ತಾರೆ. ಇನ್ನೂ ವಿಶೇಷತೆ ಅಂದ್ರೆ ಒಂದು ದೈವದ ಸೇವೆ ನಡೆಯಬೇಕಾದ್ರೆ ಎಲ್ಲಾ ಜಾತಿಯವರು ಇರಲೇಬೇಕು. ಅವರು ಕೂಡ ದೈವದ ಸೇವೆಯನ್ನು ತನ್ನ ಹಿರಿಯರು ನಡೆದು ಬಂದ ಹಾದಿಯಲ್ಲಿ ಮಾಡಿಕೊಂಡು ಮುಂದುವರಿಯುತ್ತಾರೆ. ಇದು ಈ ದೈವರಾಧನೆಯ ಶಕ್ತಿ ಮತ್ತು ಮಹಿಮೆ.
ಒಟ್ಟಿನಲ್ಲಿ ದೈವರಾಧನೆ ಅಂದ್ರೆ, ಕಾಣದ ಕೈ ಮಾಯದ ಮಾಯಾಗಾರÀ, ಪವಾಡ ಮಾಡುವ ಪವಾಡ ಪುರುಷ, ನಂಬಿದವರ ಬಾಳಿಗೆ ಅಭಯ ನೀಡುವ ರಕ್ಷಕ, ಅಧರ್ಮದ ವಿರುದ್ಧ ಹೋರಾಟ ನಡೆಸಿ ಧರ್ಮದ ಬೀಡಿನಲ್ಲಿ ನೆಲೆಗೊಳ್ಳುವ ಧರ್ಮದೈವವೇ ಈ ಕರಾವಳಿಯ ದೈವರಾಧನೆ. ಇದರ ಆಚಾರ – ವಿಚಾರ ಮತ್ತು ನಂಬಕೆ ಅನುಭವಿಸಿದವರಿಗೆ ಮಾತ್ರ ಗೊತ್ತು..!