Vikram Gokhale : ಬಾಲಿವುಡ್ ಹಿರಿಯ ನಟ ವಿಕ್ರಮ್ ಗೋಖಲೆ ನಿಧನ
ಬಾಲಿವುಡ್ ಹಿರಿಯ ನಟ ವಿಕ್ರಮ್ ಗೋಖಲೆ ಅನಾರೋಗ್ಯದಿಂದ ಪುಣೆಯ ದೀನನಾಥ್ ಮಂಗೇಶ್ಕರ್ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ಅವರಿಗೆ 77 ವರ್ಷ ವಯಸ್ಸಾಗಿತ್ತು.
ಕಳೆದ 18 ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು. ವೆಂಟಿಲೇಟರ್ ನಲ್ಲಿದ್ದ ಅವರ ಆರೋಗ್ಯಸ್ಥಿತಿ ಬುಧವಾರ ಗಂಭೀರವಾಗಿತ್ತು.
ಶುಕ್ರವಾರ ಅವರ ಆರೋಗ್ಯ ಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿತ್ತಾದರೂ ಬಹು ಅಂಗಾಂಗ ವೈಫಲ್ಯದಿಂದ ಶನಿವಾರ ಮಧ್ಯಾಹ್ನ ಸಾವನ್ನಪ್ಪಿದ್ದಾರೆ. ಅವರ ಪಾರ್ಥಿವ ಶರೀರವನ್ನು ಪುಣೆಯ ಬಾಲಗಂಧರ್ವ ರಂಗಮಂದಿರದಲ್ಲಿ ಇರಿಸಲಾಗುವುದು. ಇಂದು ಸಂಜೆ ವೈಕುಂಠ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ವಿಕ್ರಮ್ ಗೋಖಲೆ ಮರಾಠಿ ರಂಗಭೂಮಿ, ಹಿಂದಿ ಸಿನಿಮಾ ಮತ್ತು ದೂರದರ್ಶನದಲ್ಲಿ ತುಂಬಾ ಸಕ್ರಿಯರಾಗಿದ್ದರು. ಅವರು ಚಲನಚಿತ್ರ ನಟ ಚಂದ್ರಕಾಂತ ಗೋಖಲೆಯವರ ಮಗ. ವಿಕ್ರಮ್ ಗೋಖಲೆಯವರ ಅಜ್ಜಿ ಕಮಲಾಬಾಯಿ ಗೋಖಲೆ ಭಾರತೀಯ ಚಿತ್ರರಂಗದ ಮೊದಲ ಮಹಿಳಾ ಬಾಲ ಕಲಾವಿದೆ.
ಸಂಜಯ್ ಲೀಲಾ ಬನ್ಸಾಲಿ ಅವರ ‘ಹಮ್ ದಿಲ್ ದೇ ಚುಕೇ ಸನಮ್’ ಚಿತ್ರದಲ್ಲಿ ವಿಕ್ರಮ್ ಗೋಖಲೆ ಐಶ್ವರ್ಯಾ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೆ, ಅವರು ‘ಭೂಲ್ ಭುಲೈಯಾ’, ‘ದಿಲ್ ಸೇ’, ‘ಅಗ್ನಿಪಥ್’, ‘ದೇ ದಾನ ದಾನ್’, ‘ಹಿಚ್ಕಿ’, ‘ನಿಕಮ್ಮ’, ‘ಮತ್ತು’ ಮಿಷನ್ ಮಂಗಲ್ ಮುಂತಾದ ಚಿತ್ರಗಳ ಭಾಗವಾಗಿದ್ದರು.
ವಿಕ್ರಮ್ ಗೋಖಲೆ 1971 ರಲ್ಲಿ ಬಿಡುಗಡೆಯಾದ ಅಮಿತಾಬ್ ಬಚ್ಚನ್ ಅವರ ಚಲನಚಿತ್ರ ಪರ್ವಾನಾದಿಂದ ಬಾಲಿವುಡ್ನಲ್ಲಿ ತಮ್ಮ ಸಿನಿ ವೃತ್ತಿಜೀವನವನ್ನು ಪ್ರಾರಂಭಿಸಿದರು.
Vikram Gokhale bollywood actor demise