Prem : ಚಿತ್ರರಂಗಕ್ಕೆ ಕಾಲಿಟ್ಟ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್; ಧನಂಜಯ್ ಚಿತ್ರಕ್ಕೆ ನಾಯಕಿ
ಚಿತ್ರರಂಗದಲ್ಲಿ ನಟ ಹಾಗೂ ನಟಿಯರಾಗಿ ಮಿಂಚಿದವರು ತಮ್ಮ ಮಕ್ಕಳೂ ಸಹ ನಾಯಕ ನಟ ಹಾಗೂ ನಟಿಯರಾಗಿ ಚಿತ್ರರಂಗ ಪ್ರವೇಶಿಸಿ ತಮಗಿಂತ ದೊಡ್ಡಮಟ್ಟದ ಹೆಸರನ್ನು ಮಾಡಬೇಕು ಎಂದುಕೊಳ್ಳುವುದು ಸಾಮಾನ್ಯ. ಅದರಂತೆ ಈಗಾಗಲೇ ಹಲವಾರು ಸ್ಟಾರ್ ನಟ ಹಾಗೂ ನಟಿಯರ ಮಕ್ಕಳು ಚಿತ್ರರಂಗ ಪ್ರವೇಶಿಸಿದ್ದಾರೆ. ಈ ಪೈಕಿ ಕೆಲವರು ಗೆದ್ದರೆ, ಹಲವರು ಸೋತು ಬಿದ್ದಿದ್ದಾರೆ.
ಇನ್ನು ಈ ರೀತಿ ತಂದೆ ಹಾಗೂ ತಾಯಿಯಂತೆ ತಾವೂ ಸಹ ನಟ ನಟಿಯಾದವರನ್ನು ನೆಪೊಟಿಸಂ ಕಿಡ್ಸ್ ಎಂದು ಟ್ರೋಲ್ ಮಾಡಿದ್ದರೂ ಸಹ ಪ್ರತಿಭೆ ಇದ್ದವರು ಗೆದ್ದಿದ್ದಾರೆ ಹಾಗೂ ಇಲ್ಲದವರು ಬಿದ್ದಿದ್ದಾರೆ. ಕೇವಲ ತೆರೆ ಮೇಲೆ ಬಣ್ಣ ಹಚ್ಚುವ ಕಲಾವಿದರ ಮಕ್ಕಳು ಮಾತ್ರವಲ್ಲದೇ ಚಿತ್ರವನ್ನು ನಿರ್ದೇಶಿಸುವ ನಿರ್ದೇಶಕರು, ಚಿತ್ರಕ್ಕೆ ಬಂಡವಾಳ ಹೂಡುವ ನಿರ್ಮಾಪಕರ ಮಕ್ಕಳೂ ಸಹ ನಾವೂ ಒಂದು ಕೈ ನೋಡಿಯೇ ಬಿಡೋಣ ಎಂದು ಚಿತ್ರರಂಗಕ್ಕೆ ಧುಮುಕಿದ ಹಲವಾರು ಉದಾಹರಣೆಗಳಿವೆ.
ಇನ್ನು ಇತ್ತೀಚಿನ ದಿನಗಳಲ್ಲೂ ಸಹ ಸಿನಿಮಾ ಸೆಲೆಬ್ರಿಟಿಗಳ ಮಕ್ಕಳು ಚಿತ್ರರಂಗ ಪ್ರವೇಶಿಸುವುದು ಸಾಮಾನ್ಯವಾಗಿದೆ. ಕೆಲ ದಿನಗಳ ಹಿಂದಷ್ಟೇ ಕನಸಿನ ರಾಣಿ ಮಾಲಾಶ್ರೀ ಹಾಗೂ ದಿವಂಗತ ನಿರ್ಮಾಪಕ ರಾಮು ಅವರ ಪುತ್ರಿ ರಾಧನಾ ರಾಮ್ ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಶನ್ನ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದರು. ಈ ಸಾಲಿಗೆ ಇದೀಗ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ನೂತನವಾಗಿ ಸೇರ್ಪಡೆಗೊಂಡಿದ್ದಾರೆ.
ಟಗರು ಚಿತ್ರದ ಮೂಲಕ ದೊಡ್ಡ ಬ್ರೇಕ್ ಪಡೆದ ಡಾಲಿ ಧನಂಜಯ್ ತಮ್ಮದೇ ಆದ ಸ್ವಂತ ಚಿತ್ರ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದು, ಮೊದಲಿಗೆ ತಮ್ಮದೇ ನಟನೆಯ ಬಡವ ರಾಸ್ಕಲ್ ಚಿತ್ರಕ್ಕೆ ಬಂಡವಾಳ ಹೂಡಿ ಗೆದ್ದಿದ್ದರು. ನಂತರ ಹೆಡ್ ಬುಷ್ ಚಿತ್ರಕ್ಕೂ ಬಂಡವಾಳ ಹೂಡಿದ್ದ ಡಾಲಿ ಧನಂಜಯ್ ಇದೀಗ ತಮ್ಮ ಡಾಲಿ ಪಿಕ್ಷರ್ಸ್ ಅಡಿಯಲ್ಲಿ ‘ಟಗರು ಪಲ್ಯ’ ಎಂಬ ಮೂರನೇ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಈ ಚಿತ್ರದ ಮೂಲಕ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಅವರನ್ನು ಪರಿಚಯಿಸುತ್ತಿದ್ದೇವೆ ಎಂದು ಧನಂಜಯ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಈ ಚಿತ್ರದಲ್ಲಿ ನಾಯಕನಾಗಿ ಇಕ್ಕಟ್ ಚಿತ್ರ ಖ್ಯಾತಿಯ ನಾಗಭೂಷಣ್ ನಟಿಸಲಿದ್ದು, ಉಮೇಶ್ ಕೆ ಕೃಪ ಆಕ್ಷನ್ ಕಟ್ ಹೇಳಲಿದ್ದಾರೆ.
ಧನಂಜಯ್ ಪೋಸ್ಟ್ ಹೀಗಿದೆ
“ನಮ್ಮ ಪ್ರೀತಿಯ ನೆನಪಿರಲಿ ಪ್ರೇಮ್ ಅಣ್ಣನ ಮಗಳನ್ನು ಕನ್ನಡದ ಮಣ್ಣಿನ ಸೊಗಡಿನ ಮಗಳಾಗಿ ನಮ್ಮ ಸಂಸ್ಥೆಯ ಮೂರನೆ ಕಾಣಿಕೆ “ಟಗರು ಪಲ್ಯ” ಸಿನೆಮಾದ ಮೂಲಕ ಪರಿಚಯಿಸುತ್ತಿದ್ದೇವೆ. ಅಮೃತಾ ಪ್ರೇಮ್ ಕನ್ನಡದ ಮನೆ ಮಗಳಾಗಿ ಬೆಳಗಲಿ, ಬೆಳೆಯಲಿ. ನಿಮ್ಮ ಪ್ರೀತಿ ಇರಲಿ. ಹರಸಿ. ಹಾರೈಸಿ” ಎಂದು ಚಿತ್ರಕ್ಕಾಗಿ ಮಾಡಿಸಿರುವ ಅಮೃತಾ ಪ್ರೇಮ್ ಅವರ ವಿಶೇಷ ಫೋಟೊಶೂಟ್ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಅಮೃತಾ ಪ್ರೇಮ್ ಲುಕ್ಗೆ ಅಭಿಮಾನಿಗಳು ಫಿದಾ
ಇನ್ನು ಡಾಲಿ ಧನಂಜಯ್ ಹಂಚಿಕೊಂಡ ಫೋಟೊಗಳನ್ನು ಕಂಡ ನೆಟ್ಟಿಗರು ಅಮೃತಾ ಪ್ರೇಮ್ ಲುಕ್ಗೆ ಫಿದಾ ಆಗಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಮತ್ತೋರ್ವ ಕನ್ನಡದ ನಟಿ ಸಿಕ್ಕಳು, ಈ ರೀತಿ ನಮ್ಮದೇ ರಾಜ್ಯದ ಪ್ರತಿಭೆಗಳಿಗೆ ಅವಕಾಶ ನೀಡಿದರೆ ಪರಭಾಷಾ ನಟಿಯರನ್ನು ಹಣ ಸುರಿದು ಕರೆ ತರುವುದು ತಪ್ಪುತ್ತೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಪ್ರೇಮ್ ಮಗ ಕೂಡ ಬೆಳ್ಳಿತೆರೆಗೆ
ಇನ್ನು ನೆನಪಿರಲಿ ಪ್ರೇಮ್ ಪುತ್ರಿ ಮಾತ್ರವಲ್ಲದೇ ಮಗ ಏಕಾಂತ್ ಕೂಡ ಈಗಾಗಲೇ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಹೌದು, ಇದೇ ವರ್ಷ ತೆರೆಕಂಡ ಶರಣ್ ಅಭಿನಯದ ಗುರು ಶಿಷ್ಯರು ಚಿತ್ರದಲ್ಲಿ ಏಕಾಂತ್ ಪ್ರೇಮ್ ಬಾಲನಟನಾಗಿ ಕಾಣಿಸಿಕೊಂಡಿದ್ದರು ಹಾಗೂ ತನ್ನ ನಟನೆಯಿಂದ ಜನರ ಮನಸ್ಸನ್ನೂ ಗೆದ್ದಿದ್ದರು.
Prem daughter amrutha to film industry