The Kashmir Files
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ಚಿತ್ರ ಬಾಲಿವುಡ್ ನಲ್ಲಿ ಹಲವು ದಾಖಲೆಗಳನ್ನ ಮುರಿದು 2022 ರ ಬ್ಲಾಕ್ಸ್ ಬ್ಲಾಸ್ಟರ್ ಚಿತ್ರವಾಗಿದೆ. ಆದರೇ ಈ ಚಿತ್ರ ಅಶ್ಲೀಲ ಮತ್ತು ತಪ್ಪು ಪ್ರಚಾರದ ಉದ್ದೇಶ ಹೊಂದಿದೆ ಎಂದು 53ನೇ ಭಾರತೀಯ ಚಲನಚಿತ್ರೋತ್ಸವದ(ಐಎಫ್‌ಎಫ್ಐ) ತೀರ್ಪುಗಾರರ ಮುಖ್ಯಸ್ಥ, ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಡವ್ ಲ್ಯಾಪಿಡ್ ಟೀಕಿಸಿದ್ದಾರೆ.
ಇತ್ತೀಚೆಗೆ ಗೋವಾದಲ್ಲಿ ನಡೆದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್‌ಎಫ್‌ಐ) ಕೊನೆಯ ದಿನದಂದು ಚಿತ್ರದ ಪ್ರದರ್ಶನದ ನಂತರ ಮಾತನಾಡಿದ ಲ್ಯಾಪಿಡ್ “ಚಲನಚಿತ್ರೋತ್ಸವದಲ್ಲಿ ಈ ಚಿತ್ರವನ್ನು ನೋಡಿ ವಿಚಲಿತನಾಗಿದ್ದು, ಆಘಾತಕ್ಕೊಳಗಾಗಿದ್ದೇನೆ” ಎಂದು ಹೇಳಿದ್ದಾರೆ. ‘ಈ ಅಭಿಪ್ರಾಯವನ್ನು ನಿಮ್ಮೊಂದಿಗೆ ಬಹಿರಂಗವಾಗಿ ಹಂಚಿಕೊಳ್ಳಲು ಯಾವುದೇ ಹಿಂಜರಿಕೆ ಇಲ್ಲ. ಏಕೆಂದರೆ, ಕಲೆ ಮತ್ತು ಜೀವನಕ್ಕೆ ಅಗತ್ಯವಾದ ವಿಮರ್ಶಾತ್ಮಕ ಚರ್ಚೆಯನ್ನು ಈ ವೇದಿಕೆ ಸ್ವೀಕರಿಸುತ್ತದೆ’ಎಂದು ಲ್ಯಾಪಿಡ್ ಹೇಳಿದರು. ಈ ವೇಳೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಉಪಸ್ಥಿತರಿದ್ದರು.
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಿಂದ ನಾವು ವಿಚಲಿತರಾಗಿದ್ದು, ಆಘಾತಕ್ಕೊಳಗಾಗಿದ್ದೇವೆ. ಇಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಮತ್ತು ಸ್ಪರ್ಧಾತ್ಮಕ ವಿಭಾಗಕ್ಕೆ ಸೂಕ್ತವಲ್ಲದ ಪ್ರಚಾರ ಮತ್ತು ಅಸಭ್ಯ ಚಲನಚಿತ್ರದಂತೆ ನಮಗೆ ಭಾಸವಾಯಿತು’ ಎಂದು ಅವರು ಹೇಳಿದ್ದಾರೆ.
‘ಕಾಶ್ಮೀರ್ ಫೈಲ್ಸ್’ ಅಸಭ್ಯ, ಕೀಳು ಅಭಿರುಚಿಯ ಚಿತ್ರ. ಪ್ರಚಾರದ ಉದ್ದೇಶದ ಈ ಚಿತ್ರವು ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಪರ್ಧಿಸಲು ಸೂಕ್ತವಾದುದಲ್ಲ ಎಂದು ಐಎಫ್‌ಎಫ್‌ಐ ಅಂತರರಾಷ್ಟ್ರೀಯ ಸ್ಪರ್ಧೆ ವಿಭಾಗದ ತೀರ್ಪುಗಾರರಾದ ನಾಡವ್ ಲ್ಯಾಪಿಡ್ ಹೇಳಿದ್ದಾರೆ.
ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಈ ವೀಡಿಯೊ ವೈರಲ್ ಆಗುತ್ತಿದೆ. ಅನುಪಮ್ ಖೇರ್, ಮಿಥುನ್ ಚಕ್ರವರ್ತಿ ಮತ್ತು ಪಲ್ಲವಿ ಜೋಶಿ ಅವರಂತಹ ಸ್ಟಾರ್ ನಟನೆಯ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಮಾರ್ಚ್ 11, 2022 ರಂದು ಬಿಡುಗಡೆಯಾಗಿತ್ತು.
The Kashmir Files, propaganda, vulgar – calles iffi jury