Vijay devarakonda : ಇಡಿ ವಿಚಾರಣೆಗೆ ಹಾಜರ್ ಆದ ‘ಲೈಗರ್’ ಹೀರೋ ವಿಜಯ್
ಟಾಲಿವುಡ್ ನಟ ವಿಜಯ್ ದೇವರಕೊಂಡ ನಟನೆಯ ಮತ್ತು ಪುರಿ ಜಗನ್ನಾಥ್ ನಿರ್ದೇಶನದ ಲೈಗರ್ ಚಿತ್ರ ಭಾರಿ ನೀರೀಕ್ಷೆ ಹುಟ್ಟಿಸಿ ಹೇಳ ಹೆಸರಿಲ್ಲದಂತೆ ನೆಲ ಕಚ್ಚಿತು. ಆದರೆ, ಈ ಸಿನಿಮಾದ ಬಜೆಟ್ ಬಗ್ಗೆ ಹಲವು ಆರೋಪಗಳು ಕೇಳಿ ಬಂದಿವೆ.
ಈ ಸಿನಿಮಾ ನಿರ್ಮಾಣಕ್ಕಾಗಿ ವಿದೇಶದಿಂದ ಹಲವು ರಾಜಕೀಯ ಮುಖಂಡರ ಖಾತೆಯಿಂದ ಹಣ ವರ್ಗಾವಣೆಯಾಗಿದೆ ಎಂಬ ಆರೋಪದಡಿ ತನಿಖೆ ನಡೆಸಲಾಗುತ್ತಿದೆ.
ಈ ಪ್ರಕರಣದಲ್ಲಿ ಈಗಾಗಲೇ ಪುರಿ ಜಗನ್ನಾಥ್ ಮತ್ತು ಚಾರ್ಮಿ ಅವರನ್ನು ಇಡಿ ತನಿಖೆಗೆ ಒಳಪಡಿಸಿದೆ. ನವೆಂಬರ್ 18 ರಂದು ಪುರಿ ಮತ್ತು ಚಾರ್ಮಿ ಕೌರ್ ಅವರನ್ನು ಇಡಿ ವಿಚಾರಣೆ ನಡೆಸಿತ್ತು. ವಿದೇಶಿ ವಿನಿಮಯ ಹಣ ಕಾಯಿದೆ (ಫೆಮಾ) ಉಲ್ಲಂಘನೆ ಆರೋಪದ ಮೇಲೆ ಇಡಿ ಅವರನ್ನು ಪ್ರಶ್ನಿಸಿದೆ.
ಇಂದು ವಿಜಯ್ ದೇವರಕೊಂಡ ಕೂಡ ಇಡಿ ತನಿಖೆಗೆ ಹಾಜರಾಗಿದ್ದರು. ‘ಲೈಗರ್’ ಚಿತ್ರ ಮತ್ತು ಅವರ ಸಂಭಾವನೆ ಬಗ್ಗೆ ಇಡಿ ವಿಜಯ್ ಅವರನ್ನು ಪ್ರಶ್ನಿಸಿದೆ. ಸಿನಿಮಾ ವಿಚಾರವಾಗಿ ದುಬೈನಿಂದ ಹಣ ವರ್ಗಾವಣೆಯಾಗಿದ್ದು, ರಾಜಕೀಯ ವ್ಯಕ್ತಿಯ ಕೈವಾಡವಿದೆ ಎಂದು ಇ ಡಿ ಶಂಕಿಸಿದೆ.