Kantara : ತುಳುಗೂ ಡಬ್ ಆಗಿ ರಿಲೀಸ್ ಆದ ಕಾಂತಾರ..!!
ರಿಷಬ್ ಶೆಟ್ಟಿ ನಟನೆಯ ಕಾಂತಾರ ಚಿತ್ರ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿ ದೇಶಾದ್ಯಂತ ಚಿತ್ರ ಪ್ರೇಮಿಗಳ ಮನ ಗೆದ್ದಿದೆ. ಅದರ ಜೊತೆಗೆ ತುಳುನಾಡಿನ ಕಥೆಯನ್ನ ತುಳು ಭಾಷೆಯಲ್ಲೇ ನೋಡಿ ಆನಂದಿಸಬೇಕು ಎಂಬ ತುಳುವರ ಆಸೆಯನ್ನೂ ಹೊಂಬಾಳೆ ಫಿಲಂಸ್ ಪೂರ್ಣಗೊಳಿಸುತ್ತಿದೆ.
ಕಾಂತಾರ ಇದೀಗ ತುಳು ಭಾಷೆಗೂ ಡಬ್ಬಿಂಗ್ ಆಗಿ ಇಂದಿನಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಇದರ ಜೊತೆಗೆ ಕರಾವಳಿಗರೆ ಹೆಚ್ಚಾಗಿರುವ ದುಬೈ ಸೇರಿದಂತೆ ವಿದೇಶಿ ಟಾಕಿಸ್ ಗಳಲ್ಲೂ ಚಿತ್ರ ತೆರೆಕಾಣುತ್ತಿದೆ ಎಂಬುದು ವಿಶೇಷ.
ದಕ್ಷಿಣ ಕನ್ನಡದಲ್ಲಿ ಮಂಗಳೂರು, ಉಡುಪಿ ಸೇರಿದಂತೆ ಎಲ್ಲಾ ಭಾಗಗಳಲ್ಲೂ ಸಿನಿಮಾ ತೆರೆ ಕಂಡಿದ್ದು, ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬೆಂಗಳೂರಿನ ಹಲವು ಮಾಲ್ಗಳಲ್ಲಿ `ಕಾಂತಾರ’ ತುಳುವಿನಲ್ಲಿ ರಿಲೀಸ್ ಆಗಿದೆ.
ತುಳು ಚಿತ್ರ ಬಿಡುಗಡೆಗೂ ಮುನ್ನ ರಿಷಬ್ ಶೆಟ್ಟಿ ವಿಡಿಯೋ ಬೈಟ್ ಮೂಲಕ ಮಾತನಾಡಿ ತುಳು ದೈವ ಮತ್ತು ದೈವಾರಾಧಕರ ನಂಬಿಕೆಗಳಿಗೆ ಧಕ್ಕೆ ತರುವ ಕೆಲಸ ಮಾಡದಂತೆ ಮನವಿ ಮಾಡಿದ್ದಾರೆ
“ತುಳುನಾಡ ಆಚರಣೆ, ನಂಬಿಕೆಗೆ ಧಕ್ಕೆ ಬಾರದಂತೆ ಈ ಸಿನಿಮಾವನ್ನು ಮಾಡಿದ್ದೇವೆ. ನಿಮ್ಮೆಲ್ಲರ ಬೆಂಬಲಕ್ಕೆ ಹೊಂಬಾಳೆ ಚಿತ್ರತಂಡ ಆಭಾರಿಯಾಗಿದೆ.
ಈ ಚಿತ್ರವನ್ನು ದೈವಾರಾಧಕರು, ದೈವ ನರ್ತಕರು, ದೈವಕ್ಕೆ ಸೇವೆ ನೀಡಿರುವ ಕುಟುಂಬದವರಿಗೆ ಹಾಗೂ ನಮ್ಮೆಲ್ಲರ ನೆಚ್ಚಿನ ಅಪ್ಪು ಅವರಿಗೆ ಅರ್ಪಿಸುತ್ತಿದ್ದೇವೆ.
ಈ ಸಿನಿಮಾವನ್ನು ನೋಡಿ, ಬೇರೆ ಬೇರೆ ರೀತಿ ವೀಡಿಯೋ ಅಥವಾ ಅಣಕು ಪ್ರದರ್ಶನ ಮಾಡಿ, ದೈವಾರಾಧಕರು ಹಾಗೂ ಭಕ್ತರ ನಂಬಿಕೆಗೆ ಧಕ್ಕೆ ತರುವ ಕೆಲಸ ಮಾಡಬಾರದೆಂದು ನಮ್ಮ ಸವಿನಯ ಮನವಿ.” ಎಂದು ಪೋಸ್ಟ್ ಮಾಡಿದ್ದಾರೆ.