Sandalwood : ಶೀಘ್ರದಲ್ಲೇ ಕುಂ.ವೀರಭದ್ರಪ್ಪ ಕಥೆಯಾಧಾರಿತ ‘ಕುಬುಸ’ ಟೀಸರ್ ರಿಲೀಸ್..!!
ಕುಂ.ವೀರಭದ್ರಪ್ಪ ‘ಕುಬುಸ’ ಕಥೆ ಆಧಾರಿತ ‘ಕುಬುಸ’ ಸಿನಿಮಾ ಬೆಳ್ಳಿ ತೆರೆ ಮೇಲೆ ಬರಲು ಸಜ್ಜಾಗಿದೆ. ತಾಯಿ ಮಗನ ಸೆಂಟಿಮೆಂಟ್ ಹೊತ್ತ ಈ ಚಿತ್ರ ಟೀಸರ್ ಮೂಲಕ ಪ್ರೇಕ್ಷಕರ ಮನ ತಲುಪಲು ಸಜ್ಜಾಗಿದೆ. ಶೀಘ್ರದಲ್ಲೇ ಟೀಸರ್ ಮೂಲಕ ಚಿತ್ರತಂಡ ಪ್ರೇಕ್ಷಕರನ್ನು ಎದುರು ಗೊಳ್ಳಲಿದೆ.
‘ಕುಬುಸ’ ಚಿತ್ರದ ಫಸ್ಟ್ ಲುಕ್ ಡಾಲಿ ಧನಂಜಯ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ರು. ಇದೀಗ ಸಿನಿಮಾ ತಂಡ ಚಿತ್ರೀಕರಣ ಕಂಪ್ಲೀಟ್ ಮಾಡಿ ಸೆನ್ಸಾರ್ ಅಂಗಳದಲ್ಲಿದ್ದು ಟೀಸರ್ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದೆ. ಈ ಚಿತ್ರವನ್ನು ನಿರ್ದೇಶಕ ಆರ್. ಚಂದ್ರು ಶಿಷ್ಯ ರಘು ರಾಮಚರಣ್ ಹೂವಿನ ಹಡಗಲಿ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರಾದ ಟಿ.ಎಸ್. ನಾಗಾಭರಣ, ಪ್ರೇಮ್, ಸತ್ಯ ಪ್ರಕಾಶ್ ಸಿನಿಮಾಗಳಲ್ಲೂ ಸಹಾಯಕ ನಿರ್ದೇಶಕನಾಗಿ, ಕಲಾವಿದನಾಗಿ ಗುರುತಿಸಿಕೊಂಡಿರುವ ಇವರು ಇದೀಗ ‘ಕುಬುಸ’ ಸಿನಿಮಾ ಮೂಲಕ ನಿರ್ದೇಶಕರಾಗಿ ಹೊರ ಹೊಮ್ಮಿದ್ದಾರೆ.
ಕಲ್ಲು ಒಡೆದು ಹಳ್ಳಿಯಲ್ಲಿ ಜೀವನ ಸಾಗಿಸುವ ತಾಯಿ ತನ್ನ ಮಗನನ್ನು ದೂರದ ಊರಿನಲ್ಲಿ ಓದಿಸುತ್ತಿರುತ್ತಾಳೆ. ಯಾವತ್ತೂ ಬೇರೆ ಊರಿಗೆ ಪಯಣ ಬೆಳೆಸದ, ಬಸ್ಸು ಕೂಡ ಹತ್ತಿರದ ಆಕೆಯನ್ನು ಮಗ ಕೆಲಸ ಸಿಕ್ಕ ಮೇಲೆ ಸಿಟಿಗೆ ಕರೆದುಕೊಂಡು ಬರುತ್ತಾನೆ. ಮೊದಲಿನಿಂದಲೂ ಕುಬುಸ ಧರಿಸಿ ಅಭ್ಯಾಸವಿರದ ಆಕೆ ಈ ಕಾರಣದಿಂದ ನಗರಕ್ಕೆ ಬಂದಾಗ ಹೇಗೆಲ್ಲ ಜನರಿಂದ ಮುಜುಗರಕ್ಕೆ ಒಳಗಾಗುತ್ತಾಳೆ, ಮುಂದೆ ಏನಾಗುತ್ತೆ ಅನ್ನೋದು ಸಿನಿಮಾದ ಕಹಾನಿ.
ತಾಯಿ ಮಗನ ಸೆಂಟಿಮೆಂಟ್ ಇರುವ ಈ ಚಿತ್ರದಲ್ಲಿ ರಾಮ ರಾಮ ರೇ ಸಿನಿಮಾ ಖ್ಯಾತಿಯ ನಟರಾಜ್ ಎಸ್ ಭಟ್, ರಂಗಭೂಮಿ ಕಲಾವಿದೆ ಹನುಮಕ್ಕ ಮರಿಯಮ್ಮನ ಹಳ್ಳಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ನಟರಾಜ್ ಎಸ್ ಭಟ್ ಚಿತ್ರದಲ್ಲಿ ಎರಡು ಶೇಡ್ ನಲ್ಲಿ ನಟಿಸಿದ್ದು, ಆರ್ಯ ಮೈಸೂರು, ಅನಿಕ ರಮ್ಯ, ಮಹಾಲಕ್ಷ್ಮೀ ಕೂಡ ಚಿತ್ರದ ಲೀಡ್ ರೋಲ್ ನಲ್ಲಿ ಬಣ್ಣ ಹಚ್ಚಿದ್ದಾರೆ. ಪದ್ಮಶ್ರೀ ಪುರಸ್ಕೃತ ಜೋಗತಿ ಮಂಜಮ್ಮ, ಗುಂಡಿ ರಮೇಶ್, ಗುಂಡಿ ಭಾರತಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದು, ಹೊನ್ನಾವರ ಸ್ವಾಮಿ, ಹುಲಿಗಪ್ಪ ಕಟ್ಟೋಮನಿ, ಕನ್ನಡ ಕಲಾ ಸಂಘ ಹೊಸಪೇಟೆ ಕಲಾವಿದರು ‘ಕುಬುಸ’ ಚಿತ್ರದ ತಾರಾ ಬಳಗದಲ್ಲಿದ್ದಾರೆ.
ಕಲಾತ್ಮಕ ಸಿನಿಮಾಗಳಿಗಿಂತ ಭಿನ್ನವಾದ ಸಿನಿಮಾ ಇದಾಗಿದೆ. ಪೂರ್ತಿ ಸಿನಿಮಾದಲ್ಲಿ ಬಳ್ಳಾರಿ ಭಾಷೆಯ ಸೊಗಡನ್ನು ಕಾಣಬಹುದಾಗಿದೆ. ಬಳ್ಳಾರಿ ಸೊಗಡಿರೋ ಮ್ಯೂಸಿಕಲ್ ಸಿನಿಮಾವಾಗಿದ್ದು ಚಿತ್ರದಲ್ಲಿ ಎಂಟು ಹಾಡುಗಳಿವೆ. ಪ್ರದೀಪ್ ಚಂದ್ರ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದು, ಅರ್ಜುನ್ ಕಿಟ್ಟು ಸಂಕಲನ ಚೇತನ್ ಶರ್ಮಾ.ಎ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ವಿ. ಶೋಭಾ ಸಿನಿಮಾಸ್ ಬ್ಯಾನರ್ ನಡಿ ವಿ. ಶೋಭಾ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬಿಡುಗಡೆಗೆ ಎದುರು ನೋಡುತ್ತಿರೋ ಚಿತ್ರತಂಡ ಅತಿ ಶೀಘ್ರದಲ್ಲೇ ಟೀಸರ್ ಬಿಡುಗಡೆ ಮಾಡಲಿದೆ.